Saturday, April 23, 2011

ನನ್ನ ಮನಸಿನ ಮಾತು

ನೀ ನನ್ನವನೆಂದು ನಾನಂದುಕೊಂಡರೆ ಸಾಕಾಗುವುದೇ
ನೀ ನನ್ನವನೆಂದು ಸವಿಯಾಗಿ ಹೇಳಿದರೆ ಸಾಕಾಗುವುದೇ
ನನ್ನವನೆಂದು ನಿತ್ಯ ಜೊತೆಗಿರುವುದೇ
ಜೊತೆ ಕನಸು ಕಾಣುವುದೇ
ಮಾತಲ್ಲಿ ಮಾತಾಡುವುದೇ
ಏನದು ‘ನನ್ನವನ ’ ಅಂತರಾಳ

ಎದೆಯ ಗೂಡಲ್ಲಿ ಬಚ್ಚಿಡುವ ಆಸೆ ಅರಿಯುವುದೇ
ಹೃದಯಾಳದಲಿ ಮುಚ್ಚಿಟ್ಟ ಭಾವನೆಗಳ ಮಿಡಿವುದೇ
ನನ್ನವನೆಂಬುದು ನರನಾಡಿ ಬೆರೆಯುವುದೇ
ಅನಿಸಿಕೆಗಳಿಗೆ ಸ್ಪಂದಿಸುವುದೇ
ಮನದ ಮೌನ ಕೇಳುವುದೇ
ಏನದು ‘ನನ್ನವನ ’ ಅಂತರಾಳ

ಗಾಳಿಗೂ ಹಕ್ಕಿಗಿರುವ ಬಾಂಧವ್ಯ, ಹೊತ್ತು ಹಾರಿಸುದೇ
ನೀರಿಗೂ ಮೀನಿಗಿರುವ ನಂಟು, ಸರಾಗವಾಗಿ ಈಜಿಸುದೇ
ನನ್ನವನೆಂಬುದು ಅಗಲಿರಲಾದುದೇ
ನಿರರ್ಗಳ ದಾರಿಯಾಗುವುದೇ
ಬಹಿರಂಗ ಅಂತರಂಗಿಸುವುದೇ
ಏನದು ‘ನನ್ನವನ ಅಂತರಾಳ

ವಚನ ಗಮನ ತಪನಗಳ ಸಮನಾಗಿರಿಸುವುದೇ
ತೃಪ್ತಿ ಆಸಕ್ತಿ ಸ್ಫೂರ್ತಿಗಳ ಸಮ್ಮಿಶ್ರವಾಗಿರುವುದೇ
ನನ್ನವನೆಂಬುದು ಸಮಸ್ತ ಏಕವಾಗುವುದೇ
ನನ್ನವನ ನನ್ನಂತೆಯಾಗಿರುವುದೇ
ನನ್ನೊಳಗೆಯೇ ನಾನಾಗಿರುವುದೇ
ಏನದು ‘ನನ್ನವನ ’ ಅಂತರಾಳ

No comments:

Post a Comment